Monday, 6 January 2014



ಭಾವನೆಗಳು  ಬತ್ತುವವೇ?
ಭಾವನೆಗಳು  ಬತ್ತುವವೇ? 
ಮನಸೆಂಬ ಭೂಪಟವ  ಸುತ್ತುವವೇ ?

ನೋವೆಂಬ ಶಿಖರವ ಹತ್ತಿ 
ನಲಿವೆಂಬ ತಂಗಾಳಿಯ ಮುತ್ತಿ 
ಸಾವೆಂಬ ಹರಿತಾದ ಕತ್ತಿ 
ನಮ್ಮ ಎದೆಯ ಛಿದ್ರವಾಗುವ ಮುನ್ನ 

ಮನಸು, ಪ್ರೀತಿ,ಸ್ನೇಹ,ದ್ವೇಷ
ಉನ್ನತಿ, ಅವನತಿ, ಪ್ರತಿತಿಯ ವೇಷ 
ನಾಡು, ಕಾಡು, ಜಲ, ಕೀಟಗಳ  ಭಾಸ 

ಕ್ರೌರ್ಯ,ಧೈರ್ಯ, ಶೌರ್ಯಗಳ ಧೀಶ 
ನಾಗುವ ಮುನ್ನವೇ
ಭಾವನೆಗಳು  ಬತ್ತುವವೇ? 
ಮನಸೆಂಬ ಭೂಪಟವ  ಸುತ್ತುವವೇ? 

ಮಂದಹಾಸಗಳ ಮೆರಗು 
ವಿಪರ್ಯಾಸಗಳ ಬೆರಗು 
ಆಯಾಸ  ಉಪವಾಸಗಳ ಕೊರಗು 
ಒಲವು  ಚೆಲುವಿನ ಬೆಳಗು 
ಪ್ರಸರಿಸುವ ಮುನ್ನವೇ 

ಭಾವನೆಯ ಸಿಡಿಲೊಂದು 
ಸೂಕ್ಷ್ಮಗಳ ಎಳೆಗೆ ಬಡಿದು  
ಕೆಂಡವಾಗಿ ಸುಟ್ಟು ಹೋಗುವ  

ಭಾವನೆಗಳು  ಬತ್ತುವವೇ? 
ಮನಸೆಂಬ ಭೂಪಟವ  ಸುತ್ತುವವೇ?